“ಮೈ ನೇಮ್ ಈಸ್…ಜೇಮ್ಸ್ ಬಾಂಡ್” – ಸೃಷ್ಟಿಸಿದ ಇಯಾನ್ ಫ಼್ಲೆಮಿಂಗ್

ಆಂಗ್ಲ ಕಾದಂಬರಿಕಾರರ ಪರಿಚಯ ಮಾಲಿಕೆ -೬
“ಮೈ ನೇಮ್ ಈಸ್…ಜೇಮ್ಸ್ ಬಾಂಡ್” – ಸೃಷ್ಟಿಸಿದ ಇಯಾನ್ ಫ಼್ಲೆಮಿಂಗ್
~~~~~~~~~~~~~~~~~~~~~~~~~~~~~~~~~~~~~~~~~~~~


ಗೂಢಚಾರ/ರಹಸ್ಯ ಏಜೆಂಟ್ ಎಂದರೆ ಜೇಮ್ಸ್ ಬಾಂಡ್ ಎಂದು ಪ್ರಪಂಚದ ಮೂಲೆಮೂಲೆಯಲ್ಲೂ ಚಿಕ್ಕ ಮಕ್ಕಳಿಗೂ ಇಂದು ಪರಿಚಿತ. ಇಂತಾ ಒಬ್ಬ ಲೋಕವೇ ಮರೆಯದ ನಾಯಕ ಪಾತ್ರವನ್ನು ಸೃಷ್ಟಿಸಿದ್ದು ಬ್ರಿಟಿಷ್ ನೇವಲ್ ಇಂಟೆಲಿಜೆನ್ಸ್ ವಿಭಾಗದಲ್ಲಿ ಖುದ್ದು ಅಧಿಕಾರಿಯಾಗಿ ಸೇವೆ ಸಲ್ಲಿಸಿ ನೈಜ ಅನುಭವ ಪಡೆದ ಪ್ರಸಿದ್ಧ ಲೇಖಕ ಇಯಾನ್( ಅಯಾನ್) ಫ಼್ಲೆಮಿಂಗ್(1908 – 1964).
ಎರಡನೇ ಮಹಾಯುದ್ಧದಲ್ಲಿ ತನ್ನ ಸ್ವಂತ ಅನುಭವ ಮತ್ತು ನಂತರ ಪತ್ರಕರ್ತನಾಗಿ ದುಡಿದು ಭಟ್ಟಿ ಇಳಿಸಿದ ಅನುಭವಸಾರವೇ ಜಗ ಮೆಚ್ಚಿದ ಏಜೆಂಟ್ ಜೇಮ್ಸ್ ಬಾಂಡ್ ಸರಣಿಯ ಕಾದಂಬರಿಗಳು. ತಮ್ಮ ೫೬ ವಯಸ್ಸಿನಲ್ಲೇ ನಿಧನರಾದರು ಇಯಾನ್.
ಅವರ ಮರಣದ ನಂತರವೂ ಇಂದಿಗೂ ಆ ಪಾತ್ರದ ಸರಣಿ ಚಲನಚಿತ್ರಗಳು ಬಿಡುಗಡೆಯಾಗುತ್ತಲೇ ಇರುವುದರಿಂದ ಹಲವರಿಗೆ ಅವರು ಖುದ್ದಾಗಿ ಬರೆದ ಕತೆಗಳೆಷ್ಟು, ನಂತರ ಚಿತ್ರ ನಿರ್ಮಾಪಕರು ಸೃಷ್ಟಿಸಿದ ಚಿತ್ರಕತೆಗಳ್ಯಾವುವು ಎಂಬುದರ ಮಾಹಿತಿ ಇಲ್ಲ.. ಅವರು ಬರೆದದ್ದು ೧೪ ಕಾದಂಬರಿಗಳು ಒಂದಾದ ಮೇಲೊಂದು.. ತದ ನಂತರ ಬಂದ ಮುಂದುವರೆದ ಸರಣಿ ಕತೆ/ ಚಿತ್ರಕತೆಗಳು ಸೇರಿ ಮೊತ್ತ ೨೪!
ಇಯಾನ್ ಮೊದಲು ಬರೆದ ಜೇಮ್ಸ್ ಬಾಂಡ್ ಕಾದಂಬರಿ -ಕ್ಯಾಸಿನೋ ರೊಯಾಲ್(೧೯೫೩). ಅನಂತರ ’ಲಿವ್ ಅಂಡ್ ಲೆಟ್ ಡೈ ’..ಹೀಗೆ ೧೪ ..ಆಕ್ಟೋಪಸ್ಸಿ(೧೯೬೬) ವರೆಗೂ!
ಅವರ ಪಾತ್ರಧಾರಿ ಜೇಮ್ಸ್ ಓರ್ವ ತನ್ನ ಬ್ರಿಟಿಷ್ ಇಂಟೆಲಿಜೆನ್ಸ್ ಅಧಿಕಾರಿ, ಅವನ ಕೋಡ್ ನಂಬರ್ ೦೦೭, ಅವನಿಗೆ ಕೊಲ್ಲಲು ಲೈಸೆನ್ಸ್ ಉಂಟು, ಅವನ ಬಾಸ್ ರಹಸ್ಯಮಯ ಸಂಕ್ಷಿಪ್ತ ಹೆಸರಿನ “ಎಂ” ಅವನನ್ನು ಚಿತ್ರವಿಚಿತ್ರ ಸನ್ನಿವೇಶಗಳಲ್ಲಿಯೂ ನಂಬಿ ಒಂದು ಪ್ರಪಂಚವನ್ನೇ ರಕ್ಷಿಸುವಂತಾ ಮಿಶನ್ನಿಗೆ ಕಳಿಸುತ್ತಿರುತ್ತಾನೆ.. ಜೇಮ್ಸ್ ಸುಂದರಾಂಗ ಜೆಂಟಲ್ ಮನ್, ಅವನ ಹಾವಭಾವ ಮತ್ತು ಚಾರ್ಮ್ ಗೆ ಹೆಂಗಳೆಯರು ( ವೈರಿ ಪಕ್ಷದವರೂ) ಮನಸೋತು ಪ್ರಣಯ ರಾಗ ಹಾಡುತ್ತಾ ಶರಣಾಗುತ್ತಾರೆ. ಅವನ ಬಾಸಿನ ಸೆಕ್ರೆಟರಿ ಮಿಸ್ ಮನಿಪೆನ್ನಿ ಕೂಡಾ ಮನದಲ್ಲೆ ಜೇಮ್ಸ್ ಅನ್ನು ಆರಾಧಿಸುತ್ತಾಳೆ…ಆದರೆ ಸರ್ವ ವಿದ್ಯಾ ಪಾರಂಗತ ಜೇಮ್ಸ್ ಯಾರಿಂದಲೂ ಮೋಸ ಹೋಗುವುದಿಲ್ಲ…ಅವನು ಕುಡಿಯುವ ಮದ್ಯ- ಮಾರ್ಟಿನಿ, ಅವನ ಸಿಗರೇಟ್ ಸೇದುವ ಶೈಲಿ, ಅವನ ಸ್ಪೆಷಲ್ ವ್ಯವಸ್ಥೆಯುಳ್ಳ ಏಕೈಕ ಕಾರ್ -ಬೆಂಟ್ಲಿ, ಅವನ ಸ್ಪೆಷಲ್ ರಿವಾಲ್ವರ್- ವಾಲ್ಥರ್ ಪಿಪಿಕೆ ೭.೬೫, ಅವನಿಗೆ ಬೆರಗಾಗುವಂತಾ ತಾಂತ್ರಿಕತೆ ಒದಗಿಸಿ ವೈರಿ ವಿರುದ್ಧ ಮೇಲುಗೈ ಪಡೆವಂತೆ ಮಾಡುವಾತ “ಕ್ಯೂ” …ಹೀಗೆ , ಎಲ್ಲವೂ ಒಂದು ರೀತಿಯ ಬ್ರ್ಯಾಂಡಿಂಗ್ ಸಂಕೇತಗಳೇ. ಪದೇ ಪದೇ ಅದನ್ನೇ ಒತ್ತಿ ಹೇಳಿ ಲೇಖಕರು ಜೇಮ್ಸ್ ಬಾಂಡನ್ನು ದೊಡ್ಡ ಚಿರಪರಿಚಿತ ವ್ಯಕ್ತಿತ್ವದವನಾಗಿ ಬೆಳೆಸುತ್ತಾ ಹೋದರು.. ಅವರ ಕಾದಂಬರಿಗಳು ಎಲ್ಲೆಲ್ಲೂ ಭಿಕರಿಯಾಗಿ ಮುದ್ರಿತ ಪ್ರತಿಗಳು ಮಾಯವಾಗುವಷ್ಟು ವೇಗದಲ್ಲಿ ಖರ್ಚಾದವು.. ಇಯಾನ್ ಇದಲ್ಲದೇ ಚಿಕ್ಕ ಮಕ್ಕಳಿಗಾಗಿ ಕತೆ ಇತ್ಯಾದಿ ಬರೆದಿದ್ದು ಸಹಾ ದಾಖಲೆಯಿದೆ
ಜೇಮ್ಸ್ ಬಾಂಡ್ ಎಲ್ಲರ ಮನಗೆದ್ದು ಇಂಗ್ಲೀಷ್ ಚಲಚಿತರ್ರಂಗದಲ್ಲೂ ಒಬ್ಬ ಅನುಕರಿಸಲರ್ಹ ಸ್ಟೈಲಿಷ್ ಮೇರು ವ್ಯಕ್ತಿತ್ವದವನಾಗಿ ಮೆರೆಯುತ್ತಾ ಬೆಳೆಯುತ್ತಾ ಹೋದ..ವಿಶ್ವದ ಭಾಷೆಗಳಲ್ಲೆಲ್ಲಾ ಲೋಕಲ್ ಜೇಮ್ಸ್ ಬಾಂಡ್ ಪಾತ್ರಧಾರಿ ಚಿತ್ರಗಳು, ಕಾಪಿಗಳು ಬರುತ್ತಾ ಹೋದವು…
ಮೊದಲು ಕೆಲವು ಬಾಂಡ್ ಚಿತ್ರಗಳನ್ನು ಶಾನ್ ಕಾನೆರಿ ಎಂಬ ಪ್ರಸಿದ್ಧ ಸ್ಕಾಟಿಶ್ ನಾಯಕ ನಿಭಾಯಿಸಿ ಎಲ್ಲಾ ಚಿತ್ರರಸಿಕರ ಮನದಲ್ಲೂ ಬೇರು ಬಿಟ್ಟ..ನಂತರ ಬಂದ ಸ್ವಲ್ಪ ಸೌಮ್ಯ ಕಳೆಯ ರೋಜರ್ ಮೂರ್ ಆ ಪರಂಪರೆಯನ್ನು ಉಳಿಸಿ ಬೆಳೆಸುತ್ತಾ ಹೋದರು, ಅನಂತರ ಬಂದ ಆಕರ್ಷಕ ವ್ಯಕ್ತಿತ್ವದ ನಟ ಪಿಯರ್ಸ್ ಬ್ರೋಸ್ನಾನ್, ಮತ್ತು ಇತ್ತೀಚೆಗೆ ಗಡಸು ಮುಖದ ಡೇನಿಯಲ್ ಕ್ರೇಗ್ ಆ ಪಾತ್ರದಿಂದಲೇ ಜಗದ್ವಿಖ್ಯಾತರಾದರು. ಒಂದು ಚಿತ್ರದಲ್ಲಿ ಜಾರ್ಜ್ ಲೆಜ಼ೆನ್ಬಿ ಎಂಬವರೂ ಕೂಡಾ ಇದ್ದರು.
ಬಾಂಡ್ ಚಿತ್ರಗಳಲ್ಲಿ ನಟಿಸಲು ವಿಶ್ವಚಿತ್ರರಂಗದ ಚೆಲುವೆ ನಾಯಕಿಯರ ಸಾಲು ಸಾಲೇ ಕಾದಿರುತ್ತವೆ, ಅದನ್ನು ಅವರ ಜೀವನದ ದೊಡ್ಡ ಸಾಧನೆಯೆಂದು ಪರಿಗಣಿಸಲಾಗುತ್ತದೆ.
ಆದರೆ ಬಾಂಡ್ ಚಿತ್ರಗಳೆಲ್ಲಾ ’ಮಸಾಲೆ ಬೆರೆತ ಆತಿರೇಕ, ವೈಭವೀಕೃತ ’ ಎನ್ನುವವರಿದ್ದಾರೆ. “ಮೊದಲು ಅವರ ಕಾದಂಬರಿಗಳನ್ನು ಓದಿ ನೋಡಿ, ಚಿತ್ರಗಳಲ್ಲ” ಎನ್ನುವ ಪಟ್ಟು ಬಿಡದ ಓದುಗ ವರ್ಗವೂ ಇನ್ನೂ ಇದೆ. ಅವರ ಪುಸ್ತಕಗಳು ಅಂಗಡಿಗಳಲ್ಲಿ ಸದಾ ದೊರೆಯುತ್ತವೆ ಎಂದು ಪ್ರತೀತಿ.
ಏನೇ ಆಗಲಿ, ಜೇಮ್ಸ್ ಬಾಂಡ್ ಗನ್ ಹಿಡಿದು ಪೋಸ್ ಕೊಡುತ್ತಾ, ಮೊದಲ ಸೀನಿನಲ್ಲಿ ಬೈನಾಕ್ಯುಲರಿನಲ್ಲಿ ತನ್ನನ್ನು ಗಮನಿಸುವ ವ್ಯಕ್ತಿಗೆ ಶೂಟ್ ಮಾಡಿ ಕೊಲ್ಲುತ್ತಾ , ಸೋಲದ ಸಾಹಸಿಯಾಗಿ ರಂಜಿಸುತ್ತಾ, ವರುಷಕ್ಕೊಂದರಂತೆ ಗಲ್ಲಾ ಪೆಟ್ಟಿಗೆ ಲೂಟಿ ಹೊಡೆಯುತ್ತಲೇ ಇದ್ದಾನೆ!

ಇಯಾನ್ ಫ಼್ಲೆಮಿಂಗ್ ಬರೆದ ಕಾದಂಬರಿಗಳ ಪಟ್ಟಿ ಇಲ್ಲಿದೆ:https://en.wikipedia.org/wiki/Ian_Fleming
ಜೇಮ್ಸ್ ಬಾಂಡ್ ಚಲನಚಿತ್ರಗಳ ಪಟ್ಟಿ ಇಲ್ಲಿದೆ:http://www.007james.com/artic…/list_of_james_bond_movies.php

Advertisements

Frederick Forsyth – ಫ್ರೆಡೆರಿಕ್ ಫೋರ್ಸೈಥ್ ಎಂಬ ಕತೆಗಾರ!

ಫ಼್ರೆಡೆರಿಕ್ ಫ಼ೋರ್ಸೈಥ್ ಎಂಬ್ ಬ್ರಿಟಿಶ್ ಗೂಡಚರ್ಯೆ ಲೇಖಕ :
೧೯೩೮ ರಲ್ಲಿ ಇಂಗ್ಲೆಂಡಿನಲ್ಲಿ ಜನಿಸಿದ ಫ಼್ರೆಡೆರಿಕ್ ಫ಼ೊರ್ಸೈಥ್ ಒಬ್ಬ ವಿದೇಶಾಂಗ ಪತ್ರಕರ್ತ, ಗೂಢಚಾರ ಮತ್ತು ಸಂಶೋಧನಾತ್ಮಕ ಲೇಖಕ.

forsyth

ಇವರು ಬರೆದ ಮೊದಲ ಕೃತಿ ‘ದ ಡೇ ಆಫ್ ದ ಜೆಕಾಲ್ ’ ಎಂಬ ಹತ್ಯೆಗಾರನ ( ಈಗಿನ ಭಾಷೆಯಲ್ಲಿ ಸುಪಾರಿ ಕಿಲ್ಲರ್!) ನಿಗೂಢ ರಾಜಕೀಯ ಕಥನ ವಿಶ್ವಖಾತಿ ಪಡೆದ ಕೃತಿಯಾಯಿತು. ಫ಼್ರಾನ್ಸ್ ಅಧ್ಯಕ್ಷ ಚಾರ್ಲ್ಸ್ ಡೆ ಗಾಲ್ ಅವರನ್ನು ಕೊಲ್ಲಲು ಅವರ ರಾಜಕೀಯ ವಿರೋಧಿಗಳ ಗುಂಪೊಂದು ಅತ್ಯಂತ ಚಾಣಾಕ್ಷ ಹಾಗೂ ನಿಗೂಢ ವ್ಯಕ್ತಿತ್ವದ ಅಂತರರಾಷ್ಟ್ರೀಯ ಹತ್ಯೆಗಾರ “ಜೆಕಾಲ್ ” ಎಂಬ ಭೂಗತ ಲೋಕದ ಕೋಡ್ ಇರುವಾತನನ್ನು ಬಾಡಿಗೆಗೆ ತೆಗೆದುಕೊಳ್ಳುವ ವಸ್ತುವಿದ್ದ ಕಾದಂಬರಿ, ಅತ್ಯುತ್ತಮ ರಾಜಕೀಯ ಮಾಹಿತಿ, ಸಂಧರ್ಭ- ಸನ್ನಿವೇಶದ ಸಂಶೋಧನೆಯಿಂದ ಆಸಕ್ತಿ ಕೆರಳಿಸುವ ಥ್ರಿಲ್ಲರ್ ಎಂದು ಎಲ್ಲರ ಬಾಯಿ ಮಾತಾಯಿತು. ಅದರಲ್ಲಿ ಉಸಿರು ಬಿಗಿಹಿಡಿಯುವಂತಾ ಸನ್ನಿವೆಶಗಳು ಮೊದಲಿನಿಂದ ಕೊನೆಯ ಕ್ಷಣದವರೆಗೂ ಓದುಗರ ಆಸಕ್ತಿಯನ್ನು ಹೆಚ್ಚಿಸುತ್ತಾ ಹೋಗುತ್ತದೆ
ಮುಂದೆ ಅದುವೇ ೧೯೭೩ರಲ್ಲಿ ಎಡ್ವರ್ಡ್ ಫ಼ಾಕ್ಸ್ ಎಂಬ ನಾಯಕನ ಅಭಿನಯದಲ್ಲಿ ಅಷ್ಟೇ ಜನಪ್ರಿಯವಾದ ಚಲನಚಿತ್ರವೂ ಆಗಿ ಮೂಡಿಬಂತು. ಅದನ್ನು ಈಗಲೂ ಸ್ಮರಿಸಿಕೊಳ್ಳುವವರಿದ್ದಾರೆ ( ನನ್ನನ್ನೂ ಸೇರಿ). ಖಳನಾಯಕ ಪ್ರಧಾನ ಪಾತ್ರಕ್ಕೆ ಜನ ಸಕಾರಾತ್ಮಕವಾಗಿ ಸ್ಪಂದಿಸಿದ್ದೂ ಇದೇ ಮೊದಲೇನೋ.
ನಂತರ ಇವರು ಬರೆದ ಎರಡನೇ ಕೃತಿ- “ದಿ ಒಡೆಸ್ಸಾ ಫೈಲ್” ಎಂಬ ಕಾದಂಬರಿಯಲ್ಲಿ ಎರಡನೆ ಮಹಾಯುದ್ಧದಲ್ಲಿ ಹಿಟ್ಲರ್- ಹಿಮ್ಮಲರ್ ಮುಂತಾದ ಜರ್ಮನ್ನರ ನರಮೇಧ ಅತ್ಯಾಚಾರಗಳ ಸಂಬಂಧಿತ ವಸ್ತು ಮತ್ತು ಅದನ್ನು ಪತ್ತೆ ಮಾಡುವ ಛಲ ತೊಟ್ಟ ಒಬ್ಬ ಪತ್ರಕರ್ತನೊಬ್ಬನ ರೋಚಕ ವೃತ್ತಾಂತವಿತ್ತು. ಈ ಕಾದಂಬರಿ ಕೂಡಾ ಫೊರ್ಸೈಥ್ ಅವರ ಪ್ರಥಮ ಸ್ಥಾನವನ್ನು ಅತಿ ಶೀಘ್ರವಾಗಿ ಆಂಗ್ಲ ಸಾಹಿತ್ಯದಲ್ಲಿ ಗಟ್ಟಿ ಮಾಡಿತು. ಈ ಕಾದಂಬರಿ ಕೂಡಾ ಜನಪ್ರಿಯ ಚಲನಚಿತ್ರವಾಗಿ ಆಗಲೇ ಮೂಡಿಬಂದು ಎಲ್ಲರೂ ಫೊರ್ಸೈಥ್ ಅವರ ಮುಂದಿನ ಕೃತಿ ಯಾವಾಗ ಬಂದೀತು, ಏನು ಬರೆದಾರು ಎಂದು ಕುತೂಹಲ ಪಡುವಂತಾಯಿತು.
ಅವರ ಪ್ರತಿ ಕಾದಂಬರಿಯ ಹಿಂದೆ ತಿಂಗಳು ಗಟ್ಟಲೆ ಉತ್ತಮ ಸಂಶೋಧನೆ ಇದ್ದು, ನೈಜ ರೂಪದಲ್ಲಿ ಓದುಗರ ಕಣ್ಣಿಗೆ ಕಟ್ಟುವಂತೆ ಕಾದಂಬರಿ ರಚಿಸುವವರಾಗಿದ್ದಾರೆ.
ಇವೆರಡೇ ಅಲ್ಲದೇ ಸುಮಾರು ೧೫-೧೬ ಕಾದಂಬರಿಗಳನ್ನು ವೈವಿಧ್ಯಮಯ ರಾಜಕೀಯ, ಭೌಗೋಳಿಕ ಚಿತ್ರಣ ಮತ್ತು ವಸ್ತುವಿನಿಂದ ಸಜ್ಜುಗೊಳಿಸಿ ಆ ವರ್ಗದ ಪುಸ್ತಕಗಳಲ್ಲಿ(ಲಕ್ಷಾಂತರ ಪ್ರತಿಗಳ ಮಾರಾಟ ಕಂಡಿರುವ) ಇಂಗ್ಲೀಶಿನ ಸದಾಕಾಲದ ಬೆಸ್ಟ್ ಸೆಲ್ಲರ್ ಸ್ಥಾನದಲ್ಲಿದ್ದಾರೆ.
ನಾನು ಇನ್ನೂ ನೆನೆಪಿಟ್ಟುಕೊಂಡಿರುವ ಅವರ ಕಾದಂಬರಿಗಳ ಪಟ್ಟಿ:
ದ ಡೇ ಆಫ್ ದ ಜಕಾಲ್
ದ ಒಡೆಸ್ಸಾ ಫೈಲ್
ದ ಡಾಗ್ಸ್ ಆಫ್ ವಾರ್
ದ ಅವೆಂಜರ್
ದ ಐಕಾನ್
ದ ಫ಼ೋರ್ಥ್ ಪ್ರೊಟೋಕೋಲ್
ದ ಡೆವಿಲ್ಸ್ ಆಲ್ಟರ್ನೇಟಿವ್
ದ ಫ಼ಿಸ್ಟ್ ಆಫ್ ಗಾಡ್
ಇತ್ಯಾದಿ
ಅವರ “ದ ಡೇ ಆಫ್ ದ ಜೆಕಾಲ್ ” ಕಾದಂಬರಿಯು ಕನ್ನಡಕ್ಕೆ ಅನುವಾದವಾಗಿದೆಯೆಂದು ಸಂಪದ ಬ್ಲಾಗಿನಲ್ಲಿ ಉಲ್ಲೇಖಿಸಿದ್ದಾರೆ:
“ಅದರ ಅನುವಾದಕರು ಯಾರೆಂದು ನೆನಪಿಲ್ಲ..ಹಲವು ಆಂಗ್ಲ ಬರಹಗಳನ್ನು ಸಮರ್ಥವಾಗಿ ಕನ್ನಡೀಕರಿಸಿದ ಶ್ರೀಯುತ ಎಚ್ ಆರ್ ಚಂದ್ರವದನರಾವ್ (ಮೈಸೂರು)ಅವರೇ ಇರಬಹದು –ಸಂಪದ ಬ್ಲಾಗ್”
https://goo.gl/PNBdBc
ನಿಮ್ಮಲ್ಲಿ ಮಾಹಿತಿ ಭರಿತ ಸಂಶೋಧನಾತ್ಮಕ ( ಮತ್ತು ದಪ್ಪ ಸೈಜಿನ) ಕಾದಂಬರಿ ಇಷ್ಟ ಪಡುವವರು ಫ಼ೋರ್ಸೈಥ್ ಕತೆಗಳನ್ನು ಒಮ್ಮೆ ಓದಲೇ ಬೇಕು.
(ಎಲ್ಲ ಕಾದಂಬರಿಗಳೂ ೪.೫-೫/೫ ರೇಟಿಂಗ್ ನವು)

dayofthejackal